ಅಪಹರಣವಾಗಿದ್ದ ಐಟಿ ಅಧಿಕಾರಿ ಪುತ್ರನ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಪುತ್ರ ಶರತ್ ಸೆಪ್ಟೆಂಬರ್ 12ರಂದು ನಿಗೂಢವಾಗಿ ಕಣ್ಮರೆಯಾಗಿದ್ದ. ಇದೀಗ ಕೆಂಗೇರಿ ಸಮೀಪ ದೊಡ್ಡ ಆಲದ ಬಳಿಯಿರುವ ರಾಮೋಹಳ್ಳಿ ಕೆರೆಯಲ್ಲಿ ಪೊಲೀಸರಿಗೆ ಶರತ್ ನ ಮೃತದೇಹ ಸಿಕ್ಕಿದೆ. ಇಂದು ಬೆಳಗ್ಗೆ ಸ್ಥಳೀಯರು ಕೆರೆಯಲ್ಲಿ ಮೃತದೇಹ ಕಂಡು ಬಂದಿದೆ ನೋಡಿ ಎಂದು ಪೊಲೀಸರಿಗೆ ಮಾಹಿತಿ ನೀಡಿದರು.
ಶರತ್ ನ ಪೋಷಕರು ಮಗನಿಗೆ ಹೊಸ ಬೈಕ್ ಕೊಡಿಸಿದ್ದರು. ಅದನ್ನು ಸ್ನೇಹಿತರಿಗೆ ತೋರಿಸಿ ಸ್ವೀಟ್ ಕೊಟ್ಟು ಬರುತ್ತೇನೆಂದು ಕಳೆದ 12ರಂದು ಸಾಯಂಕಾಲ 5.30ರ ಸುಮಾರಿಗೆ ಮನೆಯಿಂದ ಶರತ್ ಹೊರಟಿದ್ದ. ಆದರೆ ಅಂದು ವಾಪಾಸಾಗಿರಲಿಲ್ಲ. ಮರುದಿನ ಶರತ್ ತಂದೆಯ ವಾಟ್ಸಾಪ್ ನಂಬರಿಗೆ ವಿಡಿಯೊ ಮೆಸೇಜ್ ಬಂದಿತ್ತು. ಅದರಲ್ಲಿ ಶರತ್ ತನ್ನನ್ನು ಯಾರೊ ಅಪಹರಿಸಿದ್ದು, 50 ಲಕ್ಷ ರೂಪಾಯಿ ನೀಡಿ ಬಿಡಿಸಿಕೊಂಡು ಹೋಗುವಂತೆಯೂ ಮತ್ತು ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಲಾಗಿತ್ತು. ಅದರಂತೆ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಬಿ ಸೇರಿ ಪೊಲೀಸರ ಆರು ತಂಡಗಳನ್ನು ರಚಿಸಲಾಗಿತ್ತು. ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಅಷ್ಟರ ಮಧ್ಯೆ ಶರತ್ ನ ಸಾವು ಸಂಭವಿಸಿದೆ.
Comments