ಕದ್ದಿದ್ದ ಎಲ್ಲಾ ಚಿನ್ನಾಭರಣಗಳನ್ನು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಕಳ್ಳರು

ಮಂಗಳೂರಿನ ಅಡುಮರೋಳಿಯ ಮನೆಯೊಂದರಿಂದ 99 ಪವನ್ ಚಿನ್ನಾಭರಣ ಹಾಗೂ 13 ಸಾವಿರ ರೂಪಾಯಿ ನಗದು ಕಳವು ಮಾಡಿದ್ದ ಕಳ್ಳರು ಮೂರೇ ದಿನಗಳಲ್ಲಿ ವಿಸ್ಮಯದಾಯಕ ರೀತಿಯಲ್ಲಿ ಕದ್ದ ಚಿನ್ನಾಭರಣವಿದ್ದ ಚೀಲ ನೀಡುವುದಲ್ಲದೆ ಇಷ್ಟೊಂದು ಚಿನ್ನಾಭರಣವನ್ನು ಮನೆಯಲ್ಲಿಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 16ರಂದು ನಗರದ ಅಡುಮರೋಳಿಯ ಮಾರಿಕಾಂಬಾ ದೇವಸ್ಥಾನದ ಬಳಿಯ ಶೇಖರ್ ಕುಂದರ್ ಹಾಗೂ ಅವರ ಪತ್ನಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಹಾಡಹಗಲೇ ಮನೆಯ ಹಿಂದಿನ ಬಾಗಿಲು ಮುರಿದು 99 ಪವನು ತೂಕದ ವಿವಿಧ ಚಿನ್ನಾಭರಣಗಳು ಮತ್ತು 13,000 ರೂ. ನಗದು ಕಳವು ಮಾಡಿದ್ದರು. ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಷ್ಟೂ ಚಿನ್ನಾಭರಣವಿರುವ ಚೀಲವನ್ನು ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ. ಆ ಚೀಲದೊಂದಿಗೆ ಒಂದು ಚೀಟಿ ಇದ್ದು, ಅದರಲ್ಲಿ ತಾವು ಕಳ್ಳತನ ಮಾಡಿ ತಪ್ಪು ಮಾಡಿಬಿಟ್ಟೆವು. ಇಷ್ಟೊಂದು ಚಿನ್ನಾಭರಣವನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಡಬೇಕು ಎಂದು ಮನೆ ಮಾಲೀಕರಿಗೆ ಕಳ್ಳರು ಸಲಹೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿನ್ನವನ್ನು ಕೊಂಡೊಯ್ದವರು ಯಾರು, ವಾಪಸ್ ತಂದದ್ದೇಕೆ ಎನ್ನುವುದು ತಿಳಿದು ಬಂದಿಲ್ಲ. ಬೈಕ್ನಲ್ಲಿ ಬಂದವರ ಸುಳಿವು ಲಭ್ಯವಾಗಿದೆ ಎಂದು ತನಿಖೆ ನಡೆಸುತ್ತಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Comments