ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ, ಸುಪ್ರೀಂ ಆದೇಶ
ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7 ವರ್ಷದ ಬಾಲಕನ ಹತ್ಯೆಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸುಪ್ರೀಂ ಕೋರ್ಟ್ ಈ ಕುರಿತು ಮೂರು ವಾರಗಳೊಳಗೆ ವಿವರ ಸಲ್ಲಿಸುವಂತೆ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಘಟನೆ ನಂತರ ಸಿಬಿಎಸ್ಇ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ,ಮಕ್ಕಳ ಸುರಕ್ಷತೆಗೆ ಎಲ್ಲಾ ಶಾಲೆಗಳು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ.
ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಸಿಬ್ಬಂದಿ ಪೊಲೀಸ್ ಪರಿಶೀಲನೆ ಮತ್ತು ಶಾಲಾ ಆವರಣದೊಳಗೆ ಹೊರಗಿನವರಿಗೆ ಪ್ರವೇಶ ನಿಯಂತ್ರಣವನ್ನು ಮಾಡಬೇಕೆಂದು ಸಿಬಿಎಸ್‌ಇ ಸುತ್ತೋಲೆಯಲ್ಲಿ ಆದೇಶ ನೀಡಿತ್ತು. ಕೇಂದ್ರ ಸರ್ಕಾರ, ಹರ್ಯಾಣ ಸರ್ಕಾರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಸಿಬಿಎಸ್‌ಇ ಗೆ ನೊಟೀಸ್ ಕಳುಹಿಸಿತ್ತು. ಈಗಿರುವ ಮಾರ್ಗಸೂಚಿಯನ್ನು ಜಾರಿಗೆ ತರುವಂತೆ ಕೋರಿ ಇಬ್ಬರು ಮಹಿಳಾ ನ್ಯಾಯವಾದಿಗಳು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್ ಹಾಗೂ ಎ.ಎಮ್.ಖನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ಕೊಲೆಯಾದ ಬಾಲಕನ ತಂದೆ ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ ಕೂಡ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ನೊಟೀಸ್ ನೀಡಲಾಗಿತ್ತು ಎಂದು ನ್ಯಾಯಾಧೀಶರು ಹೇಳಿದ್ದಾರೆ.
Comments