ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು

ಟಾಲಿವುಡ್ ನ 15 ಸೆಲೆಬ್ರಿಟಿಗಳು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಕೊಂಡಿರುವ ಬಗ್ಗೆ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ನಿರ್ಮಾಪಕ ಅಲ್ಲು ಅರವಿಂದ್ ರವರು ಹತ್ತು ತಾರೆಯರು ಡ್ರಗ್ಸ್ ಚಟಕ್ಕೆ ಒಳಗಾಗಿದ್ದು, ಅವರಿಂದ ಟಾಲಿವುಡ್ ಹೆಸರು ಹಾಳಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಇವರ ಈ ಅವ್ಯವಹಾರದ ಬಗ್ಗೆ ಸಿನಿಮಾ ಕ್ಷೇತ್ರ ಮತ್ತು ಸರ್ಕಾರ ಕಣ್ಣಿಟ್ಟಿದೆ. ಈ ಮಾಫಿಯಾ ಬಿಟೌನ್ ನಿಂದ ಟಾಲಿವುಡ್ ಕಡೆಗೆ ಬಂದಿರುವುದಾಗಿಯೂ ಆರೋಪಿಸಿದ್ದರು.
ಅಂದಹಾಗೆ ಈಗಾಗಲೇ ತೆಲಂಗಾಣ ಅಬಕಾರಿ ಮತ್ತು ತರಬೇತಿ ಇಲಾಖೆ ಇತ್ತೀಚೆಗೆ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ 15 ಟಾಲಿವುಡ್ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಿದೆ. ಅವರೆಲ್ಲರು ವಿಶೇಷ ತನಿಖಾ ತಂಡ ಹಾಗೂ ಅಬಕಾರಿ ಇಲಾಖೆ ಮುಂದೆ ಜುಲೈ 19 ರಿಂದ 27 ರ ಒಳಗಾಗಿ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಿದೆ.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯ ಮೊಬೈಲ್ ನಲ್ಲಿ ಸಿಕ್ಕ ಕೆಲವು ಮಾಹಿತಿಗಳ ಆಧಾರದಲ್ಲಿ ತೆಲುಗಿನ ಹಲವು ಸೆಲೆಬ್ರಿಟಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ಅವರುಗಳಲ್ಲಿ ನಟ ರವಿತೇಜಾ, ನಿರ್ದೇಶಕ ಪುರಿ ಜಗನ್ನಾಥ್, ಸುಭ್ರರಾಜು, ಹಾಡುಗಾರ್ತಿ ಗೀತಾ ಮಾಧುರಿ ರವರ ಪತಿ ನಂದು, ಥಾನಿಶ್, ನವದೀಪ್, ಚಾರ್ಮಿ, ಮುಮೈತಾ ಖಾನ್ ಮತ್ತು ಮುಂತಾದವರ ಹೆಸರು ಕೇಳಿಬಂದಿದೆ.
ಆದರೆ ಇವರೆಲ್ಲಾ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ನಟರು ತಮ್ಮ ಬದಲಾಗಿ ಅವರ ಲಾಯರ್ ಗಳನ್ನು ಕಳುಹಿಸುವುದಾಗಿ ತಿಳಿಸಿದ್ದು, ಅನುಮತಿ ನೀಡಿ ಎಂದು ಕೋರಿದ್ದಾರೆ ಎನ್ನಲಾಗಿದೆ. ಆದರೆ ಆ ನಟರ ಹೆಸರು ಬಹಿರಂಗವಾಗಿಲ್ಲ.
Comments