ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಮೋದಿ
ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಯೋಜನಾ ಕಾಮಗಾರಿಗೆ ಇಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಅಹ್ಮದಾಬಾದ್ ನಿಂದ ಮುಂಬೈ ನಡುವಿನ ಸುಮಾರು 509 ಕಿ.ಮೀ ದೂರವನ್ನು ಈ ಅತಿ ವೇಗದ ರೈಲು ಕೇವಲ 2.58 ಗಂಟೆಗಳಲ್ಲಿ ತಲುಪಲಿದೆ. ಬುಲೆಟ್ ರೈಲು ಯೋಜನೆಯನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.
ಈ ಯೋಜನೆ ಪೂರ್ಣಗೊಳ್ಳಲು 2022ರವರೆಗೂ ಕಾಲಮಿತಿ ವಿಧಿಸಲಾಗಿದೆ. ಅಬೆ ಅವರು ಹಿಂದಿಯಲ್ಲಿ ನಮಸ್ಕಾರ ಎಂದು ಹೇಳುವ ಮೂಲಕ ಭಾಷಣವನ್ನು ಆರಂಭಿಸಿದರು. ಅಹ್ಮದಾಬಾದ್ ನ ಅಥ್ಲೆಟಿಕ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಭಯ ನಾಯಕರು ಸ್ವಿಚ್ ಪ್ರೆಸ್ ಮಾಡುವ ಮೂಲಕ ಶಂಕುಸ್ಥಾಪನೆ ಮಾಡಿದರು. ಬಳಿಕ ಉಭಯ ನಾಯಕರಿಗೆ ಅಧಿಕಾರಿಗಳು ಬುಲೆಟ್ ರೈಲಿನ ಹಳಿ ಮಾರ್ಗದ ಮಾದರಿಯ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿದರು. ತಜ್ಞರು ಅಭಿಪ್ರಾಯಪಟ್ಟಿರುವಂತೆ ಈ ಯೋಜನೆ ಪೂರ್ಣಗೊಂಡ ಬಳಿಕ ಕೇವಲ 2 ಗಂಟೆಗಳಲ್ಲಿ ಅಹ್ಮದಾಬಾದ್ ನಿಂದ ಮುಂಬೈ ಸಂಚರಿಸಬಹುದಾಗಿದೆ.ಈ ಬೃಹತ್ ಯೋಜನೆಗೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಸಿದ್ಧವಾಗಿದೆ. ಇಂತಹ ಸಾಲಗಳಿಗೆ ವಿಶ್ವಬ್ಯಾಂಕ್ ವಾರ್ಷಿಕ ಶೇ.5 ರಿಂದ 7ರವರೆಗೂ ಬಡ್ಡಿ ವಿಧಿಸುತ್ತದೆ. ಆದರೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹಾಲಿ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವುದರಿಂದ ಶೇ.0.1ರಷ್ಟು ಬಡ್ಡಿದರಕ್ಕೆ ಸಾಲ ನೀಡಿದ್ದಾರೆ. ವಿಶ್ವ ಬ್ಯಾಂಕ್ ಸಾಲದ ಗಡುವು 25-35 ವರ್ಷಗಳಾಗಿದೆ, ಜಪಾನ್ ಸರ್ಕಾರ ಭಾರತಕ್ಕೆ 15 ವರ್ಷಗಳ ಹೆಚ್ಚುವರಿ ಕಾಲ ಮಿತಿಯನ್ನೂ ನೀಡಿದೆ. ಅದರಂತೆ ಭಾರತ ಸರ್ಕಾರ 50 ವರ್ಷಗಳಲ್ಲಿ ಈ ಸಾಲವನ್ನು ಜಪಾನ್ ಸರ್ಕಾರಕ್ಕೆ ವಾಪಸ್ ಮಾಡಬೇಕಿದೆ.
Comments