ಸುಪ್ರೀಂನ ಕೊಲಿಜಿಯಂ ವಿರುದ್ಧ ವಕೀಲರ ಅಸಮಾಧಾನ ಕೋರ್ಟ್ ಬಹಿಷ್ಕಾರ

ನ್ಯಾಯಮೂರ್ತಿ ಜಯಂತ್ ಪಟೇಲ್ ಅವರಿಗೆ ಆದ ಅನ್ಯಾಯ, ಇತರೆ ಪ್ರಾಮಾಣಿಕ ಹಾಗೂ ನ್ಯಾಯಪರವಾಗಿರುವ ನ್ಯಾಯಾಧೀಶರಿಗೆ ತೊಂದರೆಯಾಗಬಾರದು ಎನ್ನುವುದನ್ನು ಖಂಡಿಸಿ ವಕೀಲರು ಕೋರ್ಟ್ ಕಲಾಪಕ್ಕೆ ಬಹಿಷ್ಕಾರ ಹಾಕಿದರು.
ಸದ್ಯದಲ್ಲೇ ನಿವೃತ್ತರಾಗಲಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರ ಸ್ಥಾನವನ್ನು ತುಂಬಲು ಎಲ್ಲಾ ಅರ್ಹತೆ ಇದ್ದ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ಮೂರನೇ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಿದ ಕ್ರಮದಿಂದ ಬೇಸತ್ತು ನ್ಯಾಯಮೂರ್ತಿ ಜಯಂತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಹೈಕೋರ್ಟ್‌ನ ಮುಖ್ಯ ದ್ವಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ವಕೀಲರಸಂಘದ ಅಧ್ಯಕ್ಷ ಶಿವರಾಂ, ನ್ಯಾಯಾಮೂರ್ತಿ ಜಯಂತ್ ಪಟೇಲ್ ಅವರನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುವ ಮೂಲಕ ಮುಖ್ಯ ನ್ಯಾಯಾಧೀಶರಾಗುವ ಅವಕಾಶವನ್ನು ಕೊಲಿಜಿಯಂ ತಪ್ಪಿಸಿದೆ. ವರ್ಗಾವಣೆ ಮಾಡಿರುವ ಸುಪ್ರೀಂಕೋರ್ಟ್‌ನ ಕ್ರಮ ಸರಿಯಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ನ್ಯಾಯಮೂರ್ತಿ ಜಯಂತ್ ಪಟೇಲ್ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಕ್ತಿಯಾಗಿದ್ದರು. ಜಯಂತ್ ಪಟೇಲ್ ಅವರಿಗೆ ಆದ ಅನ್ಯಾಯ ಯಾವುದೇ ನ್ಯಾಯಾಧೀಶರಿಗೆ ಆಗಬಾರದು ಎಂದು ಕಲಾಪವನ್ನು ಬಹಿಷ್ಕರಿಸಲಾಗಿದೆ. ಹೈಕೋರ್ಟಿನಲ್ಲಿ ಈಗಾಗಲೇ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇದೆ. ಖಾಲಿ ಇರುವ ನ್ಯಾಯಮೂರ್ತಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ದೆಹಲಿಯ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು. ಇತ್ತ ತುಮಕೂರಿನಲ್ಲೂ 300ಕ್ಕೂ ಹೆಚ್ಚು ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು ಎಂದು ವಕೀಲರ ಸಂಘದ ಕಾರ್ಯದರ್ಶಿ ಟಿ.ಎಚ್. ಕುಮಾರ್ ತಿಳಿಸಿದರು.
Comments