ಬಿದ್ದ..ನೋಡಿಕೊಂಡು ಹೋಗೋದಲ್ಲ , ಪರಿಹಾರ ಕೊಡಿ : ಸಿಎಂಗೆ ಮಳೆ ಸಂತ್ರಸ್ತರ ತರಾಟೆ

ಅರ್ಚಕ ವಾಸುದೇವ್ ಹಾಗೂ ತಾಯಿ ಮಗಳು ಕೊಚ್ಚಿಹೋಗಿದ್ದ ಕುರುಬರಹಳ್ಳಿ ಪ್ರದೇಶಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಈ ವೇಳೆ ಸಂತ್ರಸ್ಥರ ಕುಟುಂಬ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ 5 ಮಂದಿ ಬಲಿಯಾದ ಬೆನ್ನಲ್ಲೇ ಮಳೆ ಸಂತ್ರಸ್ಥ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿದ್ದಾರೆ. ಈ ವೇಳೆ ಅಧಿಕಾರಿಗಳು ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಮೃತರ ಸಂಬಂಧಿಕರು, ಪ್ರತೀ ಬಾರಿ ಮಳೆಯಾದಾಗಲೂ ಇದೇ ಪರಿಸ್ಥಿತಿ ಇರುತ್ತದೆ. ಇಂತಹ ದುರ್ಘಟನೆಗಳು ಸಂಭವಿಸಿದಾಗ ಅಧಿಕಾರಿಗಳು ಬರುತ್ತಾರೆ..ನೋಡಿಕೊಂಡು ಹೋಗುತ್ತಾರೆ. ಅದರೆ ಯಾವುದೇ ಕಾರ್ಯಗಳೂ ಆಗುವುದಿಲ್ಲ. ಹೀಗಾಗಿ ಕೂಡಲೇ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸಂತ್ರಸ್ಥರನ್ನು ಸಂತೈಸಿದ ಸಿದ್ದರಾಮಯ್ಯ ಅವರು ತುರ್ತು ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು. ಅಲ್ಲದೆ ಮಳೆ ಅನಾಹುತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ. ಮಳೆ ಪ್ರದೇಶಕ್ಕೆ ಸಿಎಂ ಭೇಟಿ ವೇಳೆ ಬಿಬಿಎಂಪಿ ಉಪಾಯುಕ್ತರೂ ಕೂಡ ತೆರಳಿದ್ದು, ಈ ವೇಳೆ ಬಿಬಿಎಂಪಿಯಿಂದ ಸಂತ್ರಸ್ಥರಿಗೆ ದೊರಯಬೇಕಿರುವ ಪರಿಹಾರವನ್ನು ತುರ್ತಾಗಿ ನೀಡುವಂತೆ ಆದೇಶ ನೀಡಿದ್ದಾರೆ. ಅಲ್ಲದೆ ಮಳೆ ಅನಾಹುತದ ಕುರಿತು ಬಿಬಿಎಂಪಿ ಉಪಾಯುಕ್ತರಿಂದ ಸಿಎಂ ಮಾಹಿತಿ ಪಡೆದಿದ್ದಾರೆ. ಆಯುಕ್ತ ಮಂಜುನಾಥ ಪ್ರಸಾದ್ ಅವರು ಮುಖ್ಯಮಂತ್ರಿಯವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಂಜಿನಿಯರ್ ಗಳಿಗೆ ಹಾಗೂ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.
Comments